ನೀರುಕಾಯಿಮರ 
ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. (ಫೌಂಟನ್ ಟ್ರೀ, ಸಿರಿಂಜ್ ಟ್ರೀ) ಉಚ್ಚೆಕಾಯಿ ಮರ ಪರ್ಯಾಯ ನಾಮ. ಸ್ಪ್ಯಾತೋಡಿಯ, ಕಂಪ್ಯಾನುಲೇಟ ಇದರ ವೈಜ್ಞಾನಿಕ ಹೆಸರು. ಇದು ಆಫ್ರಿಕಾದ ಮೂಲ ನಿವಾಸಿ. ಹೂಬಿಟ್ಟಾಗ ತುಂಬ ಚೆಲುವಾಗಿ ಕಾಣುವುದರಿಂದ ಭಾರತ, ಶ್ರೀಲಂಕಾಗಳಿಗೂ ಇದನ್ನು ತಂದು ಬೆಳೆಸಲಾಯಿತು. ಇಲ್ಲಿನ ಹವಾಗುಣಕ್ಕೆ ಮರ ಬಲು ಚೆನ್ನಾಗಿ ಹೊಂದಿಕೊಂಡು ಬೆಳೆಯುತ್ತದೆ. ಇದು 20-25 ಮೀ.ಗಳಷ್ಟು ಎತ್ತರ ಬೆಳೆಯುತ್ತದೆ. ಕಾಂಡ ಮೃದುವಾಗಿದೆ. ಎಲೆಗಳು ಏಕಪಿಚ್ಛಕ ಮಾದರಿಯವು; ಎಲೆಗಳ ಜೋಡಣೆ ಅಭಿಮುಖ ರೀತಿಯಲ್ಲಿ, ಹೂಗೊಂಚಲು ರೇಸಿಮ್ ಮಾದರಿಯವು. ಜನವರಿ-ಫೆಬ್ರವರಿ ತಿಂಗಳಲ್ಲಿ ಒಂದು ಸಲ, ಆಗಸ್ಟ್-ನವೆಂಬರ್ ತಿಂಗಳುಗಳಲ್ಲಿ ಇನ್ನೊಂದು ಸಲ ಹೀಗೆ ವರ್ಷದಲ್ಲಿ ಎರಡು ಸಲ ಹೂ ಅರಳುವವು. ಹೂಗಳು ಕಿತ್ತಳೆ ಕೆಂಪು ಬಣ್ಣದಿಂದ ಕೂಡಿದ್ದು, ಹೂ ಬಿಟ್ಟಾಗ ಮರ ಬಲು ಅಂದವಾಗಿ ಕಾಣುತ್ತದೆ. ಆಗ ಒಂದೊಂದು ಹೂವೂ ಹಚ್ಚಿಟ್ಟ ದೀಪದಂತೆ ಕಾಣುವುದರಿಂದ ನೀರುಕಾಯಿ ಮರಕ್ಕೆ ರೋಮನ್ ಲ್ಯಾಂಪ್ ಅಥವಾ ಫ್ಲೇಮ್‍ಟ್ರೀ ಎಂಬ ಇಂಗ್ಲಿಷ್ ಹೆಸರುಗಳೂ ಇವೆ. 

ನೀರುಕಾಯಿಮರವನ್ನು ಬೇರುಕಂದಗಳಿಂದ ರೆಂಬೆಗಳಿಂದ ಮತ್ತು ಬೀಜಗಳಿಂದ ವೃದ್ಧಿಸಬಹುದು. ಇದು ಶೀಘ್ರವಾಗಿ ಬೆಳೆಯುವ ಬಗೆಯದು. ಗಟ್ಟಿಕಾಂಡದ ಮರವಲ್ಲದ್ದರಿಂದ ರಸ್ತೆಯ ಸಾಲು ಮರವಾಗಿ ನೆಡಲು ಯೋಗ್ಯವಲ್ಲ. ಆದರೂ ಅದರ ಹೂವಿನ ಅಂದ ಚೆಂದಕ್ಕಾಗಿ ರಸ್ತೆಯ ಇಬ್ಬದಿಯಲ್ಲೂ ಉದ್ಯಾನಗಳಲ್ಲೂ, ಶಾಲೆ, ಕಚೇರಿ, ಬಂಗಲೆ ಆವರಣದಲ್ಲಿಯೂ ನೆಟ್ಟು ಬೆಳೆಸುವುದಿದೆ. ನೀರುಕಾಯಿ ಮರವನ್ನು ಕಾಗದ ತಯಾರಿಕೆಯಲ್ಲಿ ಬಳಸುವುದುಂಟು.
(ಎಸ್.ಐ.ಎಚ್.; ಎಂ.ಎಚ್.ಎಂ.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ